ಲ್ಯಾನ್ಸ್ ನಾಯಕ್ ರಾಮ ಉಗ್ರ ಪಾಂಡೆ ಅವರು ೧೯೭೧ ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಹೋರಾಡಿ, ಪ್ರಾಣತೆತ್ತ ಭಾರತೀಯ ಸೈನಿಕ. ಅವರಿಗೆ ಮರಣೋತ್ತರವಾಗಿ ಭಾರತ ಸೈನ್ಯದ ಯುದ್ಧಕಾಲದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಮಹಾವೀರ ಚಕ್ರವನ್ನು ನೀಡಿ ಗೌರವಿಸಲಾಯಿತು. == ಆರಂಭಿಕ ಜೀವನ == ಲ್ಯಾನ್ಸ್ ನಾಯಕ್ ರಾಮ ಉಗ್ರ ಪಾಂಡೆ ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯ ಐಮಾ-ಬನ್ಸಿ ಗ್ರಾಮದಲ್ಲಿ ಜನಿಸಿದರು. ಅವರ ತಂದೆಯ ಹೆಸರು ಶ್ರೀ ಹಾರಖ್ ನಂದನ ಪಾಂಡೆ. ಅವರು ತಮ್ಮ ಹುಟ್ಟೂರಿನಲ್ಲಿ ಶಿಕ್ಷಣ ಪಡೆದರು. ಮೆಟ್ರಿಕ್ಯುಲೇಷನ್‌ ಉತ್ತೀರ್ಣರಾದ ನಂತರ ಅವರು ೧೯೬೨ ರಲ್ಲಿ ಭಾರತೀಯ ಸೇನೆಯ ೨೦೨ ಮೌಂಟೇನ್ ಬ್ರಿಗೇಡ್‌ನ ೮ ಗಾರ್ಡ್‌ಅನ್ನು ಸೇರಿಕೊಂಡರು. == ಮರಣ == ಇವರು ೧೯೭೧ ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಮೋರ್ಪಾರಾ ಕಾಳಗದಲ್ಲಿ ಭಾರತೀಯ ಸೇನೆಯ ತುಕುಡಿಯ ನೇತೃತ್ವ ವಹಿಸಿದ್ದರು. ಲ್ಯಾನ್ಸ್ ನಾಯಕ್ ರಾಮ ಉಗ್ರ ಪಾಂಡೆ ಅವರು ಪಾಕ್ ಸೈನ್ಯದ ತಾಣಗಳ ಮೇಲೆ ದಾಳಿ ನಡೆಸಿದರು. ಶತ್ರು ಸೈನ್ಯವನ್ನು ಸದೆಬಡೆಯಲು ಅವರು ಶತ್ರು ಸೈನ್ಯದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡು ನಾಶ ಮಾಡಿದರು. ಶತ್ರು ಪಾಳಯದ ಮೂರು ಸೈನಿಕರನ್ನು ಹೊಡೆದುರುಳಿಸಿದರು. ಈ ಕಾದಾಟದ ಸಂದರ್ಭದಲ್ಲಿ ಅವರಿಗೂ ಕೂಡಾ ಗುಂಡು ತಾಗಿ ಯುದ್ಧಭೂಮಿಯಲ್ಲಿ ವೀರ ಮರಣ ಹೊಂದಿದರು. ಅವರು ತಮ್ಮ ಮಗಳು ಸನೀತಾ ದುಬೆ ಅವರನ್ನು ಅಗಲಿದರು. == ಮಿಲಿಟರಿ ಮಾನ್ಯತೆ == ರಾಷ್ಟ್ರಕ್ಕಾಗಿ ತಮ್ಮ ಶೌರ್ಯ ಪ್ರದರ್ಶಿಸಿದ್ದಕ್ಕಾಗಿ ಲ್ಯಾನ್ಸ್ ನಾಯಕ್ ರಾಮ ಉಗ್ರ ಪಾಂಡೆ ಅವರಿಗೆ ಮರಣೋತ್ತರವಾಗಿ ಮಹಾವೀರ ಚಕ್ರ ನೀಡಿ ಗೌರವಿಸಲಾಗಿದೆ. == ಉಲ್ಲೇಖಗಳು ==